ವೀಕೆಂಡ್‌ನಲ್ಲಿ ರಮೇಶ್ ಜೊತೆ ಕಿಚ್ಚ ಸುದೀಪ್
Posted date: 19 Tue, Apr 2016 – 11:08:48 AM

 ಕನ್ನಡ ನಾಡಿನ ಹಲವಾರು ಸಾಧಕರ ಸಾಧನೆಯ ಹಾದಿಯನ್ನು ಮೆಲುಕು ಹಾಕಿ, ಕರ್ನಾಟಕದಾದ್ಯಂತ ಜನಪ್ರಿಯವಾಗಿರುವ, ವಾರಾಂತ್ಯದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಇದೀಗ ಮುಕ್ತಾಯ ಹಂತ ತಲುಪಿದೆ.  ಇದೇ ಏಪ್ರಿಲ್ ೨೩ ಹಾಗೂ ೨೪ರಂದು ಪ್ರಸಾರವಾಗುವ ವೀಕೆಂಡ್ ವಿಥ್ ರಮೇಶ್, ಸೀಸನ್ ೨ ಗ್ರಾಂಡ್ ಫಿನಾಲೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಜೀವನದ ಪುಟಗಳಲ್ಲಿನ ಆಟೋಗ್ರಾಫ್‌ಗಳ ಸವಿ ನೆನಪುಗಳ ಬಗ್ಗೆ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ, ಕಿಚ್ಚ ಸುದೀಪ್ ವೀಕೆಂಡ್‌ಗೆ ಎಂಟ್ರಿ ಕೊಟ್ಟು ಸಾಧಕರ ಸೀಟಿನ ಮೇಲೆ ಕೂರುವ ಬದಲು, ರಮೇಶ್ ಅವರನ್ನೇ ಸೀಟಿನ ಮೇಲೆ ಕೂರಿಸಿ ಮಾತನಾಡತೊಡಗಿದರು. ಆನಂತರ ರಮೇಶ್  ಕಿಚ್ಚನನ್ನು ಸಾಧಕರ ಸೀಟಿನ ಮೇಲೆ ಕೂರಿಸಿ ಅವರು ಜೀವನದಲ್ಲಿ ನಡೆದುಬಂದ ಹಾದಿಯನ್ನು ಕೆದಕುತ್ತಾ ಹೋದರು.
  ನಟ ರಮೇಶ್ ಸುದೀಪ್‌ರ ಅಂತರಾಳವನ್ನು ಕೆದಕುತ್ತಾ ಹೋದಂತೆ, ಅವರ ಹೃದಯದಲ್ಲಡಗಿದ್ದ  ಮಾತುಗಳು ಒಂದೊಂದಾಗಿ ಹೊರಬರತೊಡಿಗಿದವು. ಚಿಕ್ಕಂದಿನಲ್ಲಿ ಶಿವಮೊಗ್ಗದಲ್ಲಿ ಅವರು ಆಡಿದ ತುಂಟಾಟಗಳು, ಅಕ್ಕಂದಿರ ಜೊತೆಗಿನ ಬಾಂಧವ್ಯ, ತಂದೆ ತಾಯಿಯ ಜೊತೆಗಿನ ಸಂಬಂಧ, ಕೂಡುಕುಟುಂಬದ ಸಂತಸವನ್ನು ಮೆಲುಕು ಹಾಕಿದ ಕಿಚ್ಚ, ತಮ್ಮದೇ ಶೈಲಿಯಲ್ಲಿ ವಿವರಿಸಿದರು.
ಆರಂಭದ ದಿನಗಳಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಾಗ ಎದುರಿಸಿದಂಥ ಸಮಸ್ಯೆಗಳು, ಕಾಲೇಜು ದಿನಗಳಲ್ಲಿನ ಕ್ರಿಕೆಟ್ ಆಟದ ಹುಚ್ಚು, ಗಿಟಾರ್ ಕಲಿತ ದಿನಗಳು, ಮುಂಬೈಗೆ ಆಕ್ಟಿಂಗ್ ತರಬೇತಿಗೆ ಹೋದ ಸಂದರ್ಭ, ಇವುಗಳೆಲ್ಲ ಪರದೆಯ ಮೇಲೆ ಮೂಡಿದಾಗ ಸ್ವತಃ ಸುದೀಪ್ ಅವರೇ ಅಚ್ಚರಿಗೀಡಾಗಿದರು. ಚಿತ್ರರಂಗಕ್ಕೆ ಬಂದಾಗ ಎದುರಿಸಿದ ನೋವು ಅವಮಾನಗಳ ಬಗ್ಗೆ ಕೂಡ ಮಾತನಾಡಿದ ಕಿಚ್ಚ, ಗೆಲುವಿನ ಹಿಂದಿನ ಕಷ್ಟಗಳನ್ನು ನೆನಪಿಸಿಕೊಂಡರು.
ಕ್ರೇಜಿ ಸ್ಟಾರ್ ರವಿಚಂದ್ರನ್, ಕ್ರಿಕೆಟಿಗ ಜಿ. ವಿಶ್ವನಾಥ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಯೋಗರಾಜ್ ಭಟ್, ಅರ್ಜುನ್ ಜನ್ಯ, ನಂದಕಿಶೋರ್, ಅರುಣ್ ಸಾಗರ್, ಧರ್ಮ, ಹೀಗೆ ಹಲವು ಗಣ್ಯರು ಆಗಮಿಸಿ ಸುದೀಪ್ ಬಗ್ಗೆ ಮಾತನಾಡಿರು. ಈ ಕಾರ್ಯಕ್ರಮದಲ್ಲಿ ತಾವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮಿಸ್ ಮಾಡಿಕೊಂಡೆ ಎಂದು ಹೇಳಿ, ತಮ್ಮ ಸ್ನೇಹ ವಿವಾದಗಳನ್ನು ಮೀರಿದ್ದೆಂದು ಹೇಳಿ ತಮ್ಮ ಗೆಳೆತನ ಬಹಳ ಎತ್ತರದ್ದು ಎಂದು ಹೇಳಿಕೊಂಡರು.
ತಮ್ಮ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿಯ ಬಗ್ಗೆಯೂ ಮಾತನಾಡಿ, ತಮ್ಮ ಇಂದಿನ ಈ ಬೆಳವಣಿಗೆಗೆ ಮುಖ್ಯ ಕಾರಣ ಅವರೇ ಎಂದು ಹೇಳಿ, ಅವರ ಪ್ರೀತಿಗೆ ತಾವು ಸದಾ ಚಿರಋಣಿ ಎಂದರು.
ಕಿಚ್ಚ ಸುದೀಪ್ ಅವರ ಬಗ್ಗೆ ಅಭಿಮಾನಿಗಳು ಕಂಡಿರದ ಅನೇಕ ಸಂಗತಿಗಳು,  ಅದೆಷ್ಟೋ ನೆನಪುಗಳು ಹೃದಯಾಂತರಾಳದಿಂದ ಹೊರಬಂದು ವೀಕೆಂಡ್ ವಿಥ್ ರಮೇಶ್ ಗ್ರಾಂಡ್ ಫಿನಾಲೆಗೆ ಒಂದು ವಿಶೇಷ ಅಂತ್ಯವನ್ನು ತಂದುಕೊಟ್ಟಿದೆ.


GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed